ಸೋಮವಾರ, ನವೆಂಬರ್ 11, 2019

ಸಂತಸ ಬಡು

ಸದಾ ಸಂತಸದ ಹೊನಲು ಧರೆಗಿಳಿಯಲಿ ಹೋರಾಟ,ಹಾರಾಟ.... ನಕಾರಾತ್ಮಕತೆ ಪಾತಾಳಕ್ಕಿಳಿಯಲಿ ಅನುಭವಿಸು ಸುಖದ ಅನುರಣವ ಎಲ್ಲೇ ಮೀರದೆ ಬೆನ್ನು ತಟ್ಟಿಕೊ ನಿನ್ನ ನೀನೇ .... ಮುನ್ನುಗ್ಗು,ಹಾನಿಮಾಡದಿರು ,ಪರರ ಸಂತಸವ ನಿಯಂತ್ರಿಸಿಕೊ,ಸಹಿಸಿಕೋ ..... ಇಲ್ಲಿ ಶಾಶ್ವತವಾದುದು ಯಾವುದೂ ಇಲ್ಲ ತಿಳಿ ಕಾಲ ನಗುವುದು ನಿನ್ನ ತೀರಕೆ ಎಳೆದೊಯ್ಯುವುದು ನೀನು ಕೈಗೊಂಬೆ ತಿಳಿ ಸಮಯದ ಪಾತ್ರೆ ಕರಗುತಿಹುದು ಎಚ್ಛೆತ್ತುಕೊ... ಸಂತಸ ಬಡು ಅನುದಿನ .....

ಗುರುವಾರ, ಅಕ್ಟೋಬರ್ 31, 2019

ದೇವರೊಂದಿಗಿನ ಸಂಜೆಯ ಕಾಫಿ

ಒಮ್ಮೆ ಹೀಗೆ ಬೇಸರದಿ ವಾಯುವಿಹಾರಕ್ಕೆ ತೆರಳಿದ್ದೆ. ಬೆಂಗಳೂರಿನ ಅಂಕು-ಡೊಂಕು, ಗುಂಡಿಗಳನ್ನೇ ಹೊತ್ತ ರಸ್ತೆಯ ಮೇಲೆ ಕುಂಟುತ್ತಾ ಹೊರಟೆ ಸಂಜೆಯ ಕಾಫಿ ಹೀರಲು. ಅಚಾನಕ್ಕಾಗಿ ಮಳೆರಾಯ ಕಂಬನಿ ಆಗಸದಿಂದ ಸುರಿಸುತ್ತಿದ್ದ. ಹಾಗು ಹೀಗೂ ಹಾರಾಡುತ್ತಾ, ಹೋರಾಡುತ್ತಾ ಹೋಟಲ್ ಹೊಕ್ಕೆ. ಬಿಸಿ ಬಿಸಿ ಕಾಫಿಗೆ ಹಣ ಕೊಟ್ಟು ಚೀಟಿಯ ಪಡೆದೆ. ಜಿಗಿ ಜಿಗಿ ಮಳೆ,ಜನದಟ್ಟಣೆಯ ಆ ಹುಡುಗ ನಸುನಗುತ್ತಾ ಬಟ್ಟೆ ತೊಯ್ದರೂ ತನ್ನ ಕೆಲಸ ಮಾಡುತ್ತಲೇ ಸಂತೋಷಪಡುತ್ತಿದ್ದ. ಸೊಯ್ಯುನೆ ಬೀಸುವ ಗಾಳಿಗೆ ನಡುಗುತ್ತಾ ನನ್ನ ಬಳಿಯೇ ಬಂದು ನಿಂತ. ಅವನ ನಗು,ಮುಗ್ದತೆಗೆ ಮನ ಸೋತಿತ್ತು. ಕಾಫಿಕೊಡುವವನಿಗೆ "ಬೈ ಟು ಕಾಫಿ ಕೊಡು" ಎಂದೆ . ಒಂದು ಲೋಟ ನಾ ತೆಗೆದುಕೊಂಡೆ, ಮತ್ತೊಂದನ್ನು ಪಕ್ಕದ್ದಲ್ಲೇ ನಿಂತಿದ್ದವವ ಕೈಗಿಡುತ್ತಾ "ತೆಗೆದು ಕೋ" ಎಂದೆ . ನಸು ನಗುತ್ತಾ ಬೇಡ ಎಂದರೂ ಮತ್ತೆ ತೆಗೆದುಕೋ ಎಂದು ಕೈಗಿಟ್ಟೆ. ಖುಷಿಯಿಂದಲೇ ಕೊಟ್ಟ ಕಾಫಿಯನ್ನು ಧನ್ಯತೆಯೊಂದಲೇ ಕುಡಿದು ಜನರ ಮಧ್ಯೆ ಮಾಯವಾದ. ಮತ್ತೆ ಮತ್ತೆ ಹುಡುಕಿದರೂ ಕಾಣದಾದ. ಸಂಜೆಯ ತಂಪಾದ ಮಳೆಯಲ್ಲಿ ದೇವರೊಂದಿಗೆ ಕಾಫಿಯ ಸವಿದ ಹಾಗಾಯಿತು. ಮನಸ್ಸು ಅವನ ನಗುವಿನಲ್ಲೇ ತೇಲಿಹೋಯಿತು.