ಹಿರಣ್ಯಬ್ರಹ್ಮ ಸಂಸ್ಥಾಪಿತ ಶಂಭೋ,
ತಾಳಗುಂದ ನಿವಾಸ ಪ್ರಣವೇಶ್ವರ ಶಂಭೋ,
ಶಾತವಾಹನರ ರಾಜರಿಂ ಸಂಪೂಜಿತ ಶಂಭೋ,
ಮೂರು ಲೋಕದೊಡೆಯ ತ್ರಿನೇತ್ರ ಶಂಭೋ,
ಕದಂಬ ಸುಗಂಧ ಪುಷ್ಪ ಅರ್ಚಿತ ಶಂಭೋ
ಪಾಹಿಮಾಂ, ಪಾಹಿಮಾಂ.
ತಾಳಗುಂದ —ಮಲ್ನಾಡಿನ ಹಸಿರು ಮಡಿಲಿನಲ್ಲಿ ನೆಲೆಸಿರುವ
ಶಾಂತ, ಪುರಾತನ ಗ್ರಾಮ. ಇದು ಕೇವಲ ಒಂದು ವಾಸಸ್ಥಳವಲ್ಲ, ಇದು ಒಂದು ಪವಿತ್ರ ಅಗ್ರಹಾರ,
ಬ್ರಾಹ್ಮಣರ ತಪೋಭೂಮಿ, ಇಲ್ಲಿ ಪ್ರಕೃತಿಯ ನಾದ ಮತ್ತು ವೇದಘೋಷಗಳು ಒಂದಾಗಿ ಸುತ್ತಲ ಪರಿಸರದ ಉಸಿರಾಗಿದೆ. ಕದಂಬ
ವೃಕ್ಷಗಳ ಬೀಡು ತಾಳಗುಂದ.
ಈ ಗ್ರಾಮದ ಹೃದಯದಲ್ಲಿ ಪ್ರಣವೇಶ್ವರ
ದೇವಾಲಯವಿದೆ — ಆಧ್ಯಾತ್ಮಿಕತೆಯ ತವರೂರು, ಶಿಲ್ಪಕಲೆಯ ಅದ್ಭುತ ಉದಾಹರಣೆ. ಪ್ರಣವೇಶ್ವರನು ಕದಂಬ ಹೂಗಳ ಪ್ರಿಯ. ದೇವಾಲಯದ ಬಲಭಾಗದಲ್ಲಿ ಒಂದು ಸಣ್ಣ
ಬೆಟ್ಟವಿದೆ, ಅದರ ಹಿಂದೆ ಒಂದು ಮಳೆ ನೀರಿನ ಕೆರೆಯಿದೆ. ಈ ಕೆರೆಯ ತೀರದಲ್ಲಿ ವೈವಿಧ್ಯಮಯ ಸಸ್ಯಸಂಪತ್ತು
ಮತ್ತು ಪ್ರಾಣಿಗಳಿಂದ ತುಂಬಿವೆ — ಹಕ್ಕಿಗಳು, ಚಿಟ್ಟೆಗಳು, ಮತ್ತು ಹೂ ಗಿಡಗಳು, ಸಸ್ಯಗಳು ಸಂತೋಷದಿಂದ ನಲಿದಿವೆ. ಭೂಮಿಯ ಮೇಲಿನ ಸ್ವರ್ಗಕ್ಕೆ ಒಂದು
ಉದಾಹರಣೆಯಂತಿದೆ.
ತಾಳಗುಂದದ ಎಲ್ಲಾ ವರ್ಗದ ಜನರೂ ಸಂತೋಷದಿಂದ,
ತೃಪ್ತಿಯಿಂದ ಬದುಕುತ್ತಿದ್ದಾರೆ. ಇಲ್ಲಿನ ಅಗ್ರಹಾರ, ವೇದಾಧ್ಯಯನದ ಗುರುಕುಲ, ವೇದಘೋಷಗಳು, ವಾಣಿಜ್ಯ
ಬೀದಿ, ಮತ್ತು ರಥಬೀದಿ — ಇವೆಲ್ಲವೂ ಈ ಗ್ರಾಮದ ವೈಶಿಷ್ಟ್ಯತೆಗಳಾಗಿವೆ. ತಾಳಗುಂದ —
ಧರ್ಮ, ಜ್ಞಾನ ಮತ್ತು ಶಾಂತಿಯ ಜೀವಂತ ಚಿತ್ರಣದ ಸಂಕೇತ. ಅಲ್ಲಿ ನದಿಯ ಹರಿವಿನ ಜುಳು ಜುಳು
ನಾದ, ಮರ ಗಿಡಗಳ ಗಾಳಿಯ ಸಂಗೀತ, ಮತ್ತು ವೇದಘೋಷಗಳ ಪ್ರತಿಧ್ವನಿ ಒಂದೇ ರಾಗವಾಗಿ ಹರಡುತ್ತಿತ್ತು.
ತಾಳಗುಂದದ ಗರ್ಭದಲ್ಲಿ ನೆಲೆಸಿದ್ದ ಪ್ರಣವೇಶ್ವರ, ಧರ್ಮದ ಆಳವಾದ ನಿಲುವುಗಳನ್ನು ಪ್ರತಿಬಿಂಬಿಸುತ್ತಿತ್ತು.
ಪ್ರತಿ ಬೆಳಿಗ್ಗೆಯೂ, ಬ್ರಾಹ್ಮಣ ಪಂಡಿತರು ಸಂಧ್ಯಾವಂದನೆಗೆ ತೊಡಗಿದಾಗ, ಆ ಭೂಮಿ ಜ್ಞಾನ ಮತ್ತು ಶ್ರದ್ಧೆಯ
ಬೆಳಕಿನಿಂದ ಹೊಳೆಯುತ್ತಿತ್ತು. ತಾಳಗುಂದದ ಪ್ರತಿಯೊಂದು ಬೀದಿ, ಪ್ರತಿಯೊಂದು ಮನೆ, ಧರ್ಮದ ಅನುಭವದ
ಪ್ರತಿಬಿಂಬವಾಗಿತ್ತು. ಆದರೆ ಆ ಶಾಂತಿಗೆ ಕತ್ತಲೆಯ ನೆರಳು ಬೀಳಲು ಆರಂಭವಾಗಿತ್ತು.
ಪಲ್ಲವ ಆಳ್ವಿಕೆಯಿಂದ ದಬ್ಬಾಳಿಕೆ, ಬ್ರಾಹ್ಮಣರಿಗೆ
ಅವಮಾನ, ಮತ್ತು ಧರ್ಮ,ಮೌಲ್ಯಗಳ ಅಧೋಗತಿ—ಇವು ತಾಳಗುಂದದ ಶಾಂತಿಗೆ ಧಕ್ಕೆಯಾಗುತ್ತಿದ್ದವು. ದೇವಾಲಯದ
ಘಂಟೆಯ ಶಬ್ದವೂ ಆತಂಕದ ಸಂಕೇತವಾಗಿ ಪರಿವರ್ತಿತವಾಗುತ್ತಿತ್ತು. ಪ್ರಕೃತಿಯ ಸೂಚನೆಗಳು, ನವಿಲುಗಳ ನರ್ತನ,
ಮತ್ತು ಅಶರೀರವಾಣಿಗಳ ಮೂಲಕ, ಒಂದು ಹೊಸ ಅಧ್ಯಾಯದ ಆರಂಭದ ಸೂಚನೆ ತಾಳಗುಂದದ ಮಡಿಲಿನಲ್ಲಿ ಮೊಳಗುತ್ತಿತ್ತು.
ಪಲ್ಲವ ಚಕ್ರವರ್ತಿಯಾದ ಶಿವಸ್ಕಂದವರ್ಮ,
ತನ್ನ ಸೇನೆಯನ್ನು ತಾಳಗುಂದದ ಮೇಲೆ ದಾಳಿ ಮಾಡಲು ಕಳುಹಿಸಿದನು. ಈ ದಾಳಿಯ ಕ್ರೂರತೆಯ ಸಂಕೇತವಾಗಿ—ಬ್ರಾಹ್ಮಣರ
ಮನೆಗಳು ಸುಡಲ್ಪಟ್ಟವು, ಪಂಡಿತರು ನಿರ್ದಯವಾಗಿ ಕೊಲ್ಲಲ್ಪಟ್ಟರು, ಪ್ರತಿಭಟಿಸಿದವರು ಕತ್ತಿಯ ಅಂಚಿಗೆ
ಕೊರಳನಿತ್ತರು, ಮಕ್ಕಳು, ಮಹಿಳೆಯರು ಅನಾಥರಾದರು. ಅಕ್ಷರಶಃ ತಾಳಗುಂದಲ್ಲಿ ಅಮಾಯಕರ ನೆತ್ತರು ಹರಿಯಿತು.
ಪ್ರಣವೇಶ್ವರ ಧ್ಯಾನದಲ್ಲಿ ತಲ್ಲೀನನಾಗಿದ್ದ. ಲಿಂಗದಮೇಲಿನ ಅಭಿಷೇಕದ ನೀರು ಇನ್ನೂ ನಿಂತಿರಲಿಲ್ಲ.
ಪವಿತ್ರ ಅಗ್ರಹಾರ ಭಸ್ಮವಾಯಿತು. ಧರ್ಮದ ತೊಟ್ಟಿಲು ಬೆಂಕಿಯಿಂದ ಆವರಿಸಲ್ಪಟ್ಟಿತು.
ಈ ದುರಂತದ ಮಧ್ಯೆ, ಹೊಸದಾಗಿ ವಿವಾಹವಾದ ಪುಷ್ಪಾವತಿ ಮತ್ತು ಬಂಧುಸೇನ ಭಯದಿಂದ
ನಡುಗುತ್ತಿದ್ದರು. ಅವರ ಜೀವನದ ಹೊಸ ಅಧ್ಯಾಯವು ರಕ್ತಪಾತದಿಂದ ಆರಂಭವಾಗಿತ್ತು. ಆದರೆ, ಧರ್ಮದ ಆಸರೆಯಲ್ಲಿ
ನಡೆಯುವವರಿಗೆ ದೈವವು ನಿತ್ಯವೂ ದಾರಿದೀಪವಾಗುವುದು. ಆಪದ್ಬಾಂಧವರಾಗಿ ಜೈನ ಮುನಿ, ಧರ್ಮದ ದಯಾಮೂರ್ತಿ,
ಆಚಾರ್ಯ ಶಾಂತಸುಮತೀ, ಈ ದಂಪತಿಯನ್ನು, ಬ್ರಾಹ್ಮಣರನ್ನು ಮತ್ತು ಇತರ ಅಸಹಾಯಕ ಬದುಕುಳಿದ ಜನರನ್ನು
ರಕ್ಷಿಸಿ ಸಮೀಪದ ಕಾಡಿನ ತನ್ನ ಆಶ್ರಮದಲ್ಲಿ ಆಶ್ರಯ ನೀಡಿದರು. ಕಾಡಿನ ಮೌನ, ಸಾವು ನೋವು, ಮತ್ತು ಭವಿಷ್ಯದ
ಭೀತಿಯಿಂದ ಆ ಕುಟುಂಬವು ಮತ್ತು ಗ್ರಾಮದ ಜನರು ದಿನಗಳನ್ನು ಕಳೆಯುತ್ತಿದ್ದರು. ಭಯದಿಂದ ತುಂಬಿದ ಹೃದಯ
ಮತ್ತು ತಪಸ್ಸಿನ ಶಕ್ತಿಯಿಂದ ಪುಷ್ಪಾವತಿ ಒಂದು ಹುಣ್ಣಿಮೆಯ ರಾತ್ರಿ ಕದಂಬ ಮರದ ನೆರಳಿನಲ್ಲಿ ಕುಳಿತುಕೊಂಡು,
ಕಣ್ಣೀರಿನಿಂದ ದೇವರನ್ನು ಪ್ರಾರ್ಥಿಸಿದಳು "ಓ ಪ್ರಣವೇಶ್ವರ ಸ್ವರೂಪವಾದ ಕದಂಬ ವೃಕ್ಷವೇ ನಮ್ಮ
ಕಷ್ಟಗಳನ್ನು ಪರಿಹರಿಸು. ನಿನ್ನ ಅಂಶದ ರಕ್ಷಕನನ್ನು ನಮ್ಮ ರಕ್ಷಣೆಗೆ ಕಳುಹು. ಧರ್ಮ, ಆಚಾರ ವಿಚಾರಗಳು,
ಶಾಂತಿ ಇಲ್ಲಿ ನೆಲೆಗೊಳ್ಳಲಿ. ಅನವರತ ನಿನ್ನ ಸೇವೆಗೈಯ್ಯುವ ಶಕ್ತಿಯನ್ನು ನಮಗೆ ನೀಡೆಂದು" ಆ
ಕದಂಬ ವೃಕ್ಷಕ್ಕೆ ಕೈ ಮುಗಿದಳು. ಯುದ್ಧದ ಭೀತಿ, ಅನಾಹುತ, ನಾಶ ಮುಗಿದ ನಂತರ,
ಕಾಡಿನ ಆಶ್ರಮದಲ್ಲಿದ್ದವರು ಜೈನ ಮುನಿಗೆ ನಮಸ್ಕರಿಸಿ ಅಗ್ರಹಾರಕ್ಕೆ ವಾಪಸ್ಸಾಗುವ ಬಯಕೆಯನ್ನು ತಿಳಿಸಿದರು.
ಜೈನ ಮುನಿ ಆಚಾರ್ಯ ಶಾಂತಸುಮತೀ ಆಶೀರ್ವದಿಸಿ ಜನತೆಯನ್ನು
ಬೀಳ್ಕೊಟ್ಟರು. ಮರಳಿ ಜೀವನವನ್ನು ಕಟ್ಟಿಕೊಳ್ಳುವತ್ತ ತಾಳಗುಂದದ ಜನತೆ ಗಮನಹರಿಸಿದರು. ಕೃಷಿ ಚಟುವಟಿಕೆಗಳು,
ಗುರುಕುಲ, ವೇದ ಪಾಠಗಳು, ಪ್ರಣವೇಶ್ವರನ ಪೂಜೆ ಮೊದಲಿನಂತೆ
ನಡೆಯತೊಡಗಿದವು. ತಾಳಗುಂದ ಮತ್ತೆ ಕಳೆ ಕಟ್ಟತೊಡಗಿತು.
ಅಗ್ರಹಾರದ ತನ್ನ ಮನೆಯಲ್ಲಿ ಬಂಧುಸೇನನಿಗೆ ಗಾಢವಾದ
ನಿದ್ದೆ ಹತ್ತಿತ್ತು. ದೂರದಲ್ಲಿ ದೇವಸ್ಥಾನದ ಘಂಟೆ ಬಾರಿಸುತ್ತಿರುವ ಸದ್ದು ಕೇಳಿಸುತ್ತಿತ್ತು. ಬಂಧುಸೇನನಿಗೆ
ಎಚ್ಚರವಾಯಿತು. ಮನಸ್ಸಿನಲ್ಲೇ ಯೋಚಿಸಿದ "ಈ ಮಧ್ಯರಾತ್ರಿಯಲ್ಲಿ ಯಾರು ದೇವಸ್ಥಾನದ ಘಂಟೆ ಜೋರಾಗಿ
ಬಾರಿಸುತ್ತಿದ್ದಾರೆ." ಕೆಲಸಮಯದ ನಂತರ ಘಂಟೆಯ ಸದ್ದು ಸ್ಥಬ್ದವಾಯಿತು. ಬಂಧುಸೇನನಿಗೆ ನಿದ್ದೆ
ಹತ್ತಿತು.
ಹೀಗೆ ಹಲವು ರಾತ್ರಿಗಳು ಬಂಧುಸೇನನಿಗೆ ಮಧ್ಯರಾತ್ರಿಯಲ್ಲಿ
ದೇವಸ್ಥಾನದ ಘಂಟೆಯ ಸದ್ದು ಕೇಳಿಸುತ್ತಿತ್ತು. ಬಂಧುಸೇನನಿಗೆ
ಅಷ್ಟೇನೂ ಗಮನವಿರಲಿಲ್ಲ. ಆದರೆ ಒಂದು ರಾತ್ರಿ ಘಂಟೆಯ ಶಬ್ದ ನಿಲ್ಲಲೇ ಇಲ್ಲ. ಬಂಧುಸೇನನಿಗೆ ನಿದ್ರಾ
ಭಂಗವಾಯಿತು. "ಇಂದು ಘಂಟೆಯನ್ನು ಬಾರಿಸುವವರು ಯಾರು?” ಎಂದು ಕಂಡುಹಿಡಿಯಲೇಬೇಕೆಂದು ನಿಶ್ಚಯಿಸಿ
ಪ್ರಣವೇಶ್ವರ ದೇವಸ್ಥಾನದ ಕಡೆಗೆ ಹೊರಟ. ಮಧ್ಯರಾತ್ರಿಯ ಇರುಳು ಹೊದ್ದಿದ ರಸ್ತೆಗಳಲ್ಲಿ, ತಿಂಗಳನ ಮಂದ
ಬೆಳಕಿನಲ್ಲಿ ಪ್ರಣವೇಶ್ವರ ದೇವಸ್ಥಾನ ಅದ್ಭುತವಾಗಿ ಕಾಣುತ್ತಿತ್ತು. ದೇವಸ್ಥಾನದ ಮುಖ್ಯದ್ವಾರ ಹಾಕಿಯೇ
ಇತ್ತು. ಯಾವುದೇ ಸುಳಿವು ಬಂಧುಸೇನನಿಗೆ ಸಿಗಲಿಲ್ಲ.
ಈ ಶಬ್ದದ ಹಿಂದಿರುವ ಸತ್ಯವೇನು?, ಅರ್ಥವೇನು? ಮನಸ್ಸಿನಲ್ಲಿ
ಯೋಚಿಸುತ್ತಲೇ ಮನೆಗೆ ಹಿಂತಿರುಗಿದ.
ಎಂದಿನಂತೆ ಮುಂಜಾನೆ ಎಚ್ಚರವಾದರೂ ಬಂಧುಸೇನನ ತಲೆಯಲ್ಲಿ ಮಧ್ಯರಾತ್ರಿಯ ದೇವಸ್ಥಾನದ ಘಂಟೆಯ ಶಬ್ದ ಗುನುಗುತ್ತಿತ್ತು. ಬೆಳಗಿನ ಆಹ್ನಿಕ ವಿಧಿಗಳನ್ನು ಮುಗಿಸಿ ಪ್ರಣವೇಶ್ವರ ದೇವಸ್ಥಾನಕ್ಕೆ ತರಾತುರಿಯಲ್ಲಿ ಹೊರಟ. ತಾಳಗುಂದದ ಪ್ರಣವೇಶ್ವರ ದೇವಸ್ಥಾನದ ರಥಬೀದಿಯಲ್ಲಿ ನಡೆವಾಗಲೂ ಘಂಟೆಯ ಶಬ್ದ ಮನದಲ್ಲಿ ಮೊಳಗುತ್ತಿತ್ತು. ಮುಖ್ಯ ದ್ವಾರ ದಾಟಿ ದೇವಸ್ಥಾನದ ದೇವರ ಮುಂದಿನ ಪ್ರಾಕಾರದಲ್ಲಿ ನಿಂತು ಆ ಬೃಹದ್ಗಂಟೆಯನ್ನೇ ದಿಟ್ಟಿಸುತ್ತಾ ನಿಂತ. ದೇವಸ್ಥಾನಕ್ಕೆ ಬಂದವರು ಘಂಟೆಯನ್ನು ಬಾರಿಸಿದಾಗಲೆಲ್ಲಾ ಅವನ ಮನದಲ್ಲಿ ಆತಂಕ, ಆಲೋಚನೆಗಳು ಹೂವನ್ನು ಮುತ್ತುವ ದುಂಬಿಗಳಂತೆ ಅವನ ಮನವನ್ನು ಮುತ್ತುತ್ತಿದ್ದವು. ಮನದ ತಲ್ಲಣವನ್ನು ಯಾರ ಬಳಿ ಹೇಳಿಕೊಳ್ಳುವುದು?. ಅವನು ಗೊಂದಲಕ್ಕೆ ಬಿದ್ದಿದ್ದ. ಕಣ್ಣು ಮುಚ್ಚಿ ಪ್ರಣವೇಶ್ವರನಲ್ಲೇ ಏಕಾಗ್ರ ಚಿತ್ತನಾಗಿ ಬೇಡಿದ "ತಂದೆ! ಏನಿದರ ಸಂಕೇತ?, ಅರ್ಥವಾಗುತ್ತಿಲ್ಲ ಪ್ರಕೃತಿಯ ಸೂಚನೆ, ದಾರಿ ತೋರಿಸು" ಎಂದು ಬೇಡಿದ. ಮಂಗಳಾರತಿ, ತೀರ್ಥವ ಸ್ವೀಕರಿಸಿ ಗುರುಕುಲದ ಕಡೆಗೆ ನಡೆದ. ಹತ್ತಿರದ ಊರಿಗೆ ಹೋಗಿರುವ ತಂದೆ ಶೂರಶರ್ಮರ ಬಳಿ
ಈ ವಿಚಾರವಾಗಿ ಕೂಲಂಕುಷವಾಗಿ ಮಾತನಾಡೋಣ ಎಂದು ಮನಸ್ಸಿನಲ್ಲೇ ಅಂದುಕೊಂಡ.
ಇತ್ತ ಪುಷ್ಪಾವತಿಗೆ ಪಾರ್ವತಿ ಸುತನಾದ ಸುಬ್ರಹ್ಮಣ್ಯನ ವಾಹನ ನವಿಲುಗಳೇ ಮನದಲ್ಲಿ ಕಾಣಿಸುತ್ತಿತ್ತು. ಕಣ್ಣು, ಮುಚ್ಚಿದರೂ ನವಿಲಿನ ನರ್ತನ, ಯಾವುದೇ ಪಕ್ಷಿಗಳನ್ನು ಕಂಡರೂ ನವಿಲೇ ನರ್ತಿಸುತ್ತಿರುವಂತೆ ಅವಳಿಗೆ ತೋರುತ್ತಿತ್ತು. ಅವಳ ಮನಸ್ಸು ಸದಾ ಸಂತೋಷದಿಂದಲೇ ತುಂಬಿರುತ್ತಿತ್ತು. ಅವಳಲ್ಲಿ ಯಾವುದೇ ಭಯ, ಆತಂಕ ಇರಲಿಲ್ಲ. ಆದರೂ, ಮನದಲ್ಲಿ ಉತ್ತರವಿಲ್ಲದ ಪ್ರಶ್ನೆ " ಇದೇನು ಈ ಹೊಸತನದ ಕನಸು?"ಪುಷ್ಪಾವತಿಯ ಮನದಲ್ಲಿ ಮಿಂಚಿ ಮರೆಯಾಯಿತು.
ಪುಷ್ಪಾವತಿ ಇನ್ನೂ ಚಿಕ್ಕವಳು ಮದುವೆಯಾಗಿ ವರುಷವೂ ಕಳೆದಿಲ್ಲ.
ಬಂಧುಸೇನ ಪಾಠಶಾಲೆಯಿಂದ ಮನೆಗೆ ಬಂದನು. ಮುಖದಲ್ಲಿ ಆತಂಕದ ಛಾಯೆ ಕಾಣುತ್ತಿತ್ತು. ಸಂಜೆ ದೇವರಿಗೆ ದೀಪ ಬೆಳಗುತ್ತಿದ್ದ ಪುಷ್ಪಾವತಿಗೆ ಬಂಧುಸೇನನ ಮನಸ್ಸಿನ ಆತಂಕ ದೂರದಿಂದಲೇ
ಕಾಣಿಸಿತು. ಕೈ ಕಾಲು ತೊಳೆದುಕೊಂಡು ಬಂದ ಬಂಧುಸೇನರನ್ನು ನೋಡಿ "ಮನದಲ್ಲಿ ಏನೋ ಚಿಂತೆ ಇರುವಂತಿದೆ" ಎಂದಳು. ಬಂಧುಸೇನ ಹೇಳಿದ "ಹಾಗೇನಿಲ್ಲ, ವಿಷಯವಂತೂ ಇದೆ, ಹೇಳುತ್ತೇನೆ" ಎಂದ. ಪುಷ್ಪಾವತಿಯ ಬೆಳಗುವ ಚಿಂತಾರಹಿತವಾದ ಮುಖವನ್ನು ನೋಡಿ" ದೇವಿ, ನೀನು ತುಂಬಾ ಸಂತೋಷವಾಗಿರುವ ಹಾಗಿದೆ. ಏನಾದರೂ ಶುಭ ಸಮಾಚಾರವೇ?" ಎಂದ. "ಅದೇನೋ ಗೊತ್ತಿಲ್ಲ, ನನ್ನ ಮನಸ್ಸು ತುಂಬಾ ಸಂತೋಷದಿಂದಿದೆ. ನನಗೆ ಎಲ್ಲೆಡೆಯಲ್ಲೂ ನವಿಲು ನರ್ತಿಸುವುದೇ ಕಾಣಿಸುತ್ತಿದೆ. ಏಕೆ ಹೀಗೆ ಅರ್ಥವಾಗುತ್ತಿಲ್ಲ" ಎಂದಳು. ಬಂಧುಸೇನ ಪುಷ್ಪಾವತಿಯ ಮಾತುಗಳನ್ನು ಕೇಳಿ ಆಶ್ಚರ್ಯಚಕಿತನಾದ. ಇವಳಿಗೆ ನವಿಲುಗಳು, ನನಗೆ ದೇವಸ್ಥಾನದ ಘಂಟೆಯ ಶಬ್ದ. ಅಲೌಕಿಕವಾದ ವಿಚಿತ್ರವೆನಿಸುವ ಘಟನಾವಳಿ ಎನಿಸುತ್ತಿದೆ ಎಂದು ಭಾವಿಸಿದನು. "ದೇವಿ, ಕೆಲವು ದಿನಗಳಿಂದ ಇಂತಹುದೇ ಘಟನೆಗಳು ನನಗೂ ಭಾಸವಾಗುತ್ತಿದೆ." ಎಂದನು. "ಹೌದೇ!, ಎಂತಹ ಘಟನೆಗಳು?" ಪ್ರಶ್ನಿಸಿದಳು ಪುಷ್ಪಾವತಿ. ಬಂಧುಸೇನ ಅವನಿಗಾದ ಮಧ್ಯರಾತ್ರಿಯ ದೇವಸ್ಥಾನದ ಘಂಟೆಯ ಸದ್ದಿನ ವಿಷಯವನ್ನು ತಿಳಿಸಿದನು. ಇಬ್ಬರಿಗೂ ಆತಂಕ ಹಾಗೂ ಆಶ್ಚರ್ಯವಾಯಿತು. ಬಂಧುಸೇನ, ತಂದೆ ಶೂರಶರ್ಮರು ಊರಿಂದ ಬಂದರೆ? ಎಂದು ಪುಷ್ಪಾವತಿಯನ್ನು ಪ್ರಶ್ನಿಸುವನು. ಅದಕ್ಕೆ ಪುಷ್ಪಾವತಿ ಇನ್ನೆರಡು ಗಳಿಗೆಗಳಲ್ಲಿ ಬರಬಹುದೆಂದು ಉತ್ತರಿಸುವಳು. ಅತ್ತ ಕಾಡಿನಲ್ಲಿ ಎತ್ತುಗಳಿಗೆ ಕಟ್ಟಿದ್ದ ಗಂಟೆಯ ಸದ್ದು ರಾತ್ರಿಯ ಕತ್ತಲೆಯನ್ನು ಬೇಧಿಸಿ ನಡೆಯುತ್ತಿತ್ತು. ಶೂರಶರ್ಮರು ಆಕಾಶದ ಚುಕ್ಕಿಗಳನ್ನು ನೋಡುತ್ತಾ ಅವ್ಯಕ್ತವಾದ ಸಂತೋಷದ ನಗೆಯನ್ನು ಬೀರುತ್ತಿದ್ದರು. ದೂರದಲ್ಲಿ ಪ್ರಣವೇಶ್ವರ ದೇವಸ್ಥಾನದ ಗುಡಿ ಗೋಪುರದ ದೀಪ ನಕ್ಷತ್ರದಂತೆ ಹೊಳೆಯುತ್ತಿತ್ತು. ಊಟದ ಸಮಯಕ್ಕೆ ಶೂರಶರ್ಮರು ತಾಳಗುಂದದ ಅಗ್ರಹಾರದ ಮನೆಯನ್ನು ತಲುಪಿದರು. ಮನೆಯ ಎದುರಿನ ತೋಟದಲ್ಲಿ ಎತ್ತಿನ ಬಂಡಿಯನ್ನು ನಿಲ್ಲಿಸಿದರು ಹಾಗೂ ಸಹಾಯಕರಿಗೆ ಎತ್ತುಗಳನ್ನು ಗೋಶಾಲೆಯಲ್ಲಿ ಕಟ್ಟಿ ನೀರು ಹಾಗೂ ಮೇವನ್ನು ನೀಡುವಂತೆಯೂ ಆನಂತರ ಊಟಕ್ಕೆ ಬರಬೇಕೆಂದು ಹೇಳಿದರು. ಮಗ ಹಾಗೂ ಸೊಸೆ ಅವರನ್ನು ಎದುರುಗೊಂಡು ಕುಶಲೋಪರಿಯನ್ನು ವಿಚಾರಿಸಿದರು. ಕೈ ಕಾಲು ತೊಳೆಯಲು ನೀರನ್ನು ನೀಡಿ ರಾತ್ರಿಯ ಊಟಕ್ಕೆ ಸಿದ್ಧವಾಗಬೇಕೆಂದು ವಿನಂತಿಸಿದರು.
ಪ್ರಯಾಣದ ಆಯಾಸದಿಂದ ಶೂರಶರ್ಮರು ಊಟದ ನಂತರ
ಬೇಗ ಮಲಗಲು ಸಿದ್ದರಾದರು. ಊಟವಾದ ನಂತರ ಬಂಧುಸೇನ ಕೆಲವು ಸಮಯ ವೇದಗ್ರಂಥಗಳ ಅಧ್ಯಯನಕ್ಕೆ ಕುಳಿತ.
ಮರುದಿನದ ಪಾಠಶಾಲೆಯ ಪಠ್ಯದ ಅಭ್ಯಾಸದಲ್ಲಿ ತೊಡಗಿದ. ಪುಷ್ಪಾವತಿಯೋ ಮನೆಗೆಲಸವನ್ನೆಲ್ಲಾ ಮುಗಿಸಿ ಕಂದೀಲನ್ನು ಕೈಯಲ್ಲಿ
ಹಿಡಿದು ಮನೆಯ ಒಳ ಅಂಗಳಕ್ಕೆ ಕಾಲಿಡುತ್ತಿದ್ದಳು. ಆ ಕತ್ತಲಿನಲ್ಲಿ, ಕಂದೀಲು ಕೈಯಲ್ಲಿ ಹಿಡಿದ ಪುಷ್ಪಾವತಿ
– ಆಕೆಯ ಮುಖದ ಹೊಳಪು ಮತ್ತು ಕಂದೀಲಿನ ಬೆಳಕು, ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳಂತೆ ತೋರುತ್ತಿದ್ದರು.
ಸನಿಹದಲ್ಲೇ ಓದುತ್ತಾ ಕುಳಿತ್ತಿದ್ದ ಬಂಧುಸೇನ ಪುಷ್ಪಾವತಿಯ ಬೆಳಕಿನ ಹೊಳಪಿಗೆ ಮರುಳಾದ. ಕೈಯಲ್ಲಿದ್ದ
ತಾಳೆಗರಿಗಳು ಹಾಗೆಯೇ ಕೈಜಾರಿತು. ಮನದ ಆತಂಕವೂ ಪುಷ್ಪಾವತಿಯ ಹೊಳಪಿಗೆ ಕಣ್ಮರೆಯಾಗಿತ್ತು. ರಾತ್ರಿಯ
ತಿಂಗಳನ ಬೆಳಕು, ತಂಪಾದ ಗಾಳಿ, ರತಿ-ಮನ್ಮಥರ ಮಿಲನೋತ್ಸವಕ್ಕೆ ಸಾಕ್ಷಿಯಾದವು. ಮುಂದಿನ ಭರವಸೆಯ ಬೆಳಕೊಂದು
ಧರೆಗೆ ಇಳಿದಿತ್ತು.
ಬೆಳಗಿನ ಜಾವ ಶೂರಶರ್ಮ, ಆಹ್ನಿಕ ವಿಧಿಗಳನ್ನು
ಪೂರೈಸಿ ಧ್ಯಾನದಲ್ಲಿ ತೊಡಗಿದ್ದರು. ಪುಷ್ಪಾವತಿ ದೇವರ ಪೂಜೆಗೆ ಅಣಿಮಾಡುತ್ತಿದ್ದಳು. ಬಂಧುಸೇನ
" ದೇವಿ ಇಂದು ಬಾವಿಯ ಬಳಿ ಸ್ನಾನಮಾಡುತ್ತಿದ್ದಾಗ ನವಿಲುಗಳ ಹಿಂಡನ್ನು ನಮ್ಮ ತೋಟದಲ್ಲಿ ಕಂಡೆ.
ಹಿಂದೆ ನಮ್ಮ ತೋಟದಲ್ಲಿ ಎಂದೂ ಕಾಣಿಸಿರಲಿಲ್ಲ. ಅಕೋ, ಕೇಳಿಸಿಕೋ ನವಿಲುಗಳು ಕೇಕೆ ಹಾಕುತ್ತಿವೆ. ನಿನಗೂ
ಕೇಳಿಸುತ್ತಿದೆಯೇ?" ಎಂದನು. ಪುಷ್ಪಾವತಿ " ಹೌದು. ನವಿಲುಗಳ ಕೇಕೆ ನನಗೂ ಕೇಳಿಸುತ್ತಿದೆ.
ನಮ್ಮ ತೋಟದಲ್ಲಿ ಎಂದೂ ನೋಡಿರಲಿಲ್ಲ" ಎಂದಳು. ನನ್ನ ಮನಸ್ಸಿನಲ್ಲಿ ಹಾಗೂ ಕನಸಿನಲ್ಲಿ ಕಾಣಿಸಿಕೊಳ್ಳುವ
ನವಿಲುಗಳಿಗೂ, ಇಂದು ನಮ್ಮ ತೋಟದಲ್ಲಿ ಕಾಣಿಸಿಕೊಂಡ ನವಿಲುಗಳಿಗೂ ಏನಾದರೂ ಸಂಬಂಧವಿದೆಯೇ?. ಯಾವುದರ
ಮುನ್ಸೂಚನೆ ಪ್ರಕೃತಿ ನನಗೆ ನೀಡುತ್ತಿದೆ. ಅಥವಾ ಇದೆಲ್ಲಾ ನನ್ನ ಭ್ರಮೆಯೋ!, ಇಲ್ಲ ಬರೀ ಕಾಕತಾಳಿಯವೋ?
ಮನದಲ್ಲೇ ಪುಷ್ಪಾವತಿ ಚಿಂತಿಸಿದಳು.
ಬಂಧುಸೇನನು ತನಗೆ ಹಾಗೂ ಪುಷ್ಪಾವತಿಗಾದ ಅನುಭವಗಳನ್ನು
ತಂದೆ ಶೂರಶರ್ಮರಿಗೆ ವಿವರಿಸಿದನು. ಶೂರಶರ್ಮರು ಆಶ್ಚರ್ಯಚಕಿತರಾಗಿ, "ಇದು ದೈವದ ಸಂಕೇತ, ಒಳ್ಳೆಯದಾಗಲಿದೆ"
ಎಂಬ ಭರವಸೆಯನ್ನು ಮಗನಿಗೆ ಮತ್ತು ಸೊಸೆಗೆ ನೀಡಿದರು.
ಕೆಲವೇ ದಿನಗಳಲ್ಲಿ, ಬಂಧುಸೇನನು ತನ್ನ ತಂದೆಗೆ
ಪುಷ್ಪಾವತಿ ಗರ್ಭಿಣಿಯಾಗಿರುವ ಸುದ್ದಿ ತಿಳಿಸಿದನು. ಶೂರಶರ್ಮರು ದೈವ ಸಂಕಲ್ಪಕ್ಕೆ ಕೃತಜ್ಞತೆ ಸಲ್ಲಿಸುತ್ತಾ,
ತಾಳಗುಂದ ಪುರದ ಪ್ರಣವೇಶ್ವರನ ಸನ್ನಿಧಿಯಲ್ಲಿ “ಕನ್ನಡನಾಡಿಗೆ ಶ್ರೇಷ್ಠ ನಾಯಕನನ್ನು ನೀಡೆಂದು” ಬಿನ್ನವಿಸಿದರು.
ವಸಂತ ಋತು, ಪಾಲ್ಗುಣ ಮಾಸ, ಶುಕ್ಲಪಕ್ಷದ ಹುಣ್ಣಿಮೆಯ
ರಾತ್ರಿ, ತಿಳಿಯಾದ ತಂಗಾಳಿಯು ಮೃದುವಾಗಿ ಬೀಸುತ್ತಿತ್ತು. ಪುಷ್ಪಾವತಿಗೆ ಪ್ರಸವದ ನೋವು ಆರಂಭವಾಗಿತ್ತು.
ಆ ರಾತ್ರಿಯಲ್ಲಿ, ಹುಣ್ಣಿಮೆಯ ಚಂದ್ರನಂತೆ ಪ್ರಕಾಶಮಾನವಾದ ಗಂಡು ಮಗುವಿಗೆ ಪುಷ್ಪಾವತಿಯು ಜನ್ಮವಿತ್ತಳು.
ತೋಟದ ನವಿಲುಗಳು ಆ ಬೆಳದಿಂಗಳಲ್ಲಿ ಸಂತೋಷದಿಂದ ನರ್ತಿಸುತ್ತಿದ್ದವು. ಪಾಲ್ಗುಣ ಮಾಸದ ಹುಣ್ಣಿಮೆಯ
ಬೆಳಕಿನಲ್ಲಿ ಫಲ್ಗುಣನ ಆಗಮನವಾಯಿತು. ಬಂಧುಸೇನ ಮತ್ತು ಶೂರಶರ್ಮರು ಸಂತೋಷಗೊಂಡರು. ತಾಳಗುಂದದ ಅಗ್ರಹಾರದಲ್ಲಿ
ಹಬ್ಬದ ವಾತಾವರಣ ಹರಡಿತು.
ತಾಯಿ-ತಂದೆ ಹಾಗೂ ತಾತನ ಆರೈಕೆಯಲ್ಲಿ ಕನ್ನಡನಾಡಿನ
ಚೈತನ್ಯವೊಂದು ಶುಕ್ಲಪಕ್ಷದ ಚಂದ್ರನಂತೆ ಬೆಳೆಯುತ್ತಿತ್ತು. ಪುಷ್ಪಾವತಿಯ ಕನಸಿನಲ್ಲಿ ಸುಬ್ರಹ್ಮಣ್ಯನ
ವಾಹನವಾದ ನವಿಲು ಪುನಃ ಕಾಣಿಸಿತು. ತೋಟದಲ್ಲಿಯೂ ನವಿಲುಗಳು ಕಾಣಿಸಿಕೊಂಡ ಕಾರಣ, ಆ ಮಗುವಿಗೆ 'ಮಯೂರಶರ್ಮ'
ಎಂದು ನಾಮಕರಣ ಮಾಡಲಾಯಿತು. ಕ್ಷಾತ್ರ ತೇಜದಿಂದ ಮಯೂರಶರ್ಮನ ಮುಖ ಹೊಳೆಯುತ್ತಿತ್ತು. ತಾಯಿ ಪುಷ್ಪಾವತಿ
ಮಯೂರನನ್ನು "ರಾಜ" ನೆಂದೇ ಕರೆಯುತ್ತಿದ್ದಳು. ಮುಂದೊಂದಿನ ತನ್ನ ಮಗ ‘ಮಯೂರ’ ರಾಜನಾಗಲಿ
ಎಂಬ ಆಶಯ ಅವಳದಾಗಿತ್ತು. ತಾಳಗುಂದದ ಪ್ರಣವೇಶ್ವರನಲ್ಲಿ ಅವಳ ಪ್ರಾರ್ಥನೆಯೂ
ಅದೇ ಆಗಿತ್ತು.
ಮಯೂರಶರ್ಮನಿಗೆ ತಾತನೇ ಮೊದಲ ಗುರು. ಮಯೂರಶರ್ಮನ
ಆಟ-ಪಾಠಗಳೆಲ್ಲವೂ ತಾತನ ಗರಡಿಯಲ್ಲಿ ನಡೆಯುತ್ತಿತ್ತು. ಅಲ್ಲಿ ಶಸ್ತ್ರ ಮತ್ತು ಶಾಸ್ತ್ರಗಳ ಪರಿಚಯವಾಯಿತು.
ಮಯೂರಶರ್ಮನು ಎರಡರಲ್ಲೂ ಪರಿಣತಿಯನ್ನು ಪಡೆದನು. ತಾಯಿಯ ಆಶಯದಂತೆ, ಪಲ್ಲವರೊಡನೆ ಸೆಣಸುವ ಮತ್ತು ತಾಳಗುಂದವನ್ನು
ಸ್ವತಂತ್ರಗೊಳಿಸುವ ಆಸೆ ಅವನೊಳಗೆ ಚಿಕ್ಕವನಿದ್ದಾಗಲೇ ಮೊಳೆತಿತ್ತು. ರಾಜನಾಗಬೇಕಾದರೆ ಅರವತ್ನಾಲ್ಕು
ವಿದ್ಯೆಗಳಲ್ಲಿಯೂ ಪರಿಣತಿ ಹೊಂದಿರಬೇಕೆಂಬ ಕಾರಣದಿಂದ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅವನು ಕಾಂಚಿಪುರಕ್ಕೆ
ಹೊರಟನು.
ಕಾಂಚಿಪುರದ ವೇದಾಧ್ಯಯನದ ಗುರುಕುಲದಲ್ಲಿ, ಒಂದು
ದಿನ ಬೆಳಗಿನ ಸಂಧ್ಯಾವಂದನೆಯ ಸಮಯ. ವಿದ್ಯಾರ್ಥಿಗಳು ಸಂಧ್ಯಾವಂದನೆಯಲ್ಲಿ ತೊಡಗಿದ್ದಾಗ, ಪಲ್ಲವ ರಾಜಕುಮಾರ
ವಿಷ್ಣುಗೋಪನು ತನ್ನ ಸೈನಿಕರೊಂದಿಗೆ ಗುರುಕುಲಕ್ಕೆ ಆಗಮಿಸುತ್ತಾನೆ. ಮುಂಜಾನೆಯ ಸಂಧ್ಯಾಸಮಯದ ಶಾಂತಿಯುತ
ವಾತಾವರಣದಲ್ಲಿ ಸ್ವಾಗತದಲ್ಲಿ ಸ್ವಲ್ಪ ವಿಳಂಬವಾಗುತ್ತದೆ. ಇದರಿಂದ ಕೋಪಗೊಂಡ ವಿಷ್ಣುಗೋಪನು, ಬ್ರಾಹ್ಮಣ
ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ. ರಾಜನಿಗೆ ತಕ್ಕಂತೆ ಮೌನವಿದ್ದ ಮಯೂರಶರ್ಮನು,
ಧರ್ಮ ಮೀರಿದ ವಿಷ್ಣುಗೋಪನ ವರ್ತನೆಯ ವಿರುದ್ಧ ತೀವ್ರವಾಗಿ ಪ್ರತಿರೋಧ ತೋರಿಸುತ್ತಾನೆ. ಇಬ್ಬರ ನಡುವೆ
ತೀವ್ರವಾದ ಮಾತಿನ ಚಕಮಕಿ ನಡೆಯುತ್ತದೆ. ವಿಷ್ಣುಗೋಪನು ತನ್ನ ಅಧಿಕಾರದ ದರ್ಪದಿಂದ ಮಯೂರಶರ್ಮನನ್ನು
ಗುರುಕುಲದಿಂದ ಬಹಿಷ್ಕರಿಸಿ, ಕಾಂಚಿಪುರದಿಂದ ಗಡೀಪಾರು ಮಾಡುವುದಾಗಿ ಘೋಷಿಸುತ್ತಾನೆ.
ಸ್ವಾಭಿಮಾನಕ್ಕೆ ದಕ್ಕೆಯಾಗುವುದನ್ನು ಸಹಿಸದ
ಮಯೂರಶರ್ಮನು ಶಪಥ ಮಾಡುತ್ತಾನೆ:
"ನಿಮ್ಮ ದೌರ್ಜನ್ಯ ಮತ್ತು ದಬ್ಬಾಳಿಕೆಗೆ
ಅಂತ್ಯ ಹಾಡುವೆನು. ಈ ಬಡ ಬ್ರಾಹ್ಮಣನನ್ನು ತಿರಸ್ಕಾರದಿಂದ ನೋಡಬೇಡಿ. ನಾನು ಪಲ್ಲವರ ಆಳ್ವಿಕೆಗೆ ಅಂತ್ಯವಿಟ್ಟು,
ಧರ್ಮವನ್ನು ರಕ್ಷಿಸಲು ಖಡ್ಗ ಹಿಡಿದು ಹೊಸ ರಾಜ್ಯವನ್ನು ಸ್ಥಾಪಿಸುತ್ತೇನೆ. ಈ ಮಾತು ವೇದಗಳಷ್ಟೇ ಸತ್ಯ.
ಗಾಯತ್ರಿ ಮಂತ್ರದ ಮೇಲಾಣೆ, ಮಾನವ್ಯ ಗೋತ್ರದ ಮಯೂರಶರ್ಮನಾದ
ನಾನು ಪ್ರತಿಜ್ಞೆ ಮಾಡುತ್ತೇನೆ."
ಜನಿವಾರವನ್ನು ಕೈಯಲ್ಲಿ ಹಿಡಿದು, ನೀರನ್ನು
ಹಾಕಿಕೊಂಡು ಮಯೂರಶರ್ಮನು ಶಪಥ ಮಾಡುತ್ತಾನೆ. ಈ ದೃಶ್ಯವನ್ನು ಗುರುಕುಲದ ವಿದ್ಯಾರ್ಥಿಗಳು, ಪಲ್ಲವ
ಸೈನಿಕರು, ಮತ್ತು ವಿಷ್ಣುಗೋಪನು ನೋಡುತ್ತಿರುತ್ತಾರೆ. ಕೋಪಗೊಂಡ ವಿಷ್ಣುಗೋಪನು ಮಯೂರಶರ್ಮನನ್ನು ಬಂಧಿಸಿ,
ಸೈನಿಕರ ಮೂಲಕ ಅವನಿಗೆ ಚಿತ್ರಹಿಂಸೆ ನೀಡುತ್ತಾನೆ. ಅವನನ್ನು ಕಾಂಚಿಪುರದ ಹೊರಗಡೆ ಎಸೆದು ಬಿಡುತ್ತಾರೆ.
ಗಾಯಗೊಂಡು, ಆದರೆ ಮನೋಬಲದಿಂದ ತುಂಬಿದ ಮಯೂರಶರ್ಮನು ಕದಂಬ ವನವಾಸಿಯಾದ ದುರ್ಗೆಯನ್ನು ಸ್ಮರಿಸುತ್ತಾ
ತಾಳಗುಂದದ ಕಡೆಗೆ ಹೆಜ್ಜೆಹಾಕುತ್ತಾನೆ— ಇದು ಹೊಸ ಅಧ್ಯಾಯದ ಪ್ರಾರಂಭಕ್ಕೆ
ಮೊದಲ ಹೆಜ್ಜೆ.
ತಾಳಗುಂದಕ್ಕೆ ಹಿಂತಿರುಗಿದ ಮಯೂರಶರ್ಮನು, ಕಾಂಚಿಪುರದಲ್ಲಿ
ತನಗಾದ ಅವಮಾನವನ್ನು ತಾಯಿ, ತಂದೆ ಹಾಗೂ ತಾತನಿಗೆ ಸವಿವರವಾಗಿ ಹಂಚಿಕೊಂಡನು. ತನ್ನ ಶಪಥ, ಧರ್ಮರಕ್ಷಣೆಯ
ಸಂಕಲ್ಪ ಮತ್ತು ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡುತ್ತಾ, ಕುಟುಂಬದ ಸಹಕಾರವನ್ನು ಕೋರಿದನು.
ಮಯೂರನ ಮಾತು ಕೇಳಿ, ಕುಟುಂಬದ ಸದಸ್ಯರು ಆತಂಕದ ಮನಸ್ಸಿನಿಂದ, ಆದರೆ ಧರ್ಮದ ಪರಿಪಾಲನೆಗಾಗಿ ಅವನಿಗೆ
ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮಯೂರಶರ್ಮನ ಮುಂದಿನ ಹೆಜ್ಜೆಗಳ ಬಗ್ಗೆ ಗಂಭೀರ ಚರ್ಚೆ ನಡೆಯುತ್ತದೆ.
ತಾಳಗುಂದದಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ಸಕಲ ಸಿದ್ಧತೆಗಳು ಆರಂಭವಾಗುತ್ತವೆ.
ಒಂದು ರಾತ್ರಿ, ದಣಿದ ಅವನು ನಿದ್ರಿಸುತ್ತಿದ್ದಾಗ,
"ಮಯೂರ, ಮಯೂರ" ಎಂಬ ಶಬ್ದ ಅಶರೀರವಾಣಿಯಂತೆ ಅವನಿಗೆ ಕೇಳಿಸುತ್ತದೆ. ಎಚ್ಚರಗೊಂಡ ಮಯೂರಶರ್ಮನು
ಮನೆಯಿಂದ ಹೊರಬಂದು ಸುತ್ತಲೂ ನೋಡಿದರೂ ಕತ್ತಲಲ್ಲಿ ಯಾರೂ ಕಾಣಿಸಲಿಲ್ಲ. ಚಿಂತಿತನಾಗಿ, ಮನೆಯ ಮುಂದಿರುವ
ಕದಂಬವೃಕ್ಷದ ಬಳಿ ನಿಂತನು. ಮತ್ತೆ "ಮಯೂರ, ಮಯೂರ" ಎಂಬ ಶಬ್ದ ಕೇಳಿಸಿತು. ಕತ್ತಲಿನ ಮಧ್ಯೆ
ಕದಂಬವೃಕ್ಷ ಪ್ರಕಾಶಮಾನವಾಗಿ ಹೊಳೆಯುತ್ತಿತ್ತು.
"ಯಾರು? ಯಾರದು? ನನ್ನನ್ನು ಕರೆದವರು" ಎಂದು
ಮಯೂರಶರ್ಮನು ಕೇಳಲು. ಆಗ :
"ನಾನು ಕದಂಬ ರಾಜ್ಯ ಲಕ್ಷ್ಮಿ. ನಿನ್ನನ್ನು
ನಾನೇ ಕರೆದದ್ದು. ನಿನಗೆ ರಾಜ್ಯ ಬೇಡವೇ? ನಿನ್ನ ಪ್ರತಿಜ್ಞೆ
ಮರೆತೆಯೇನು?" ಎಂದಿತು ಆ ಅಶರೀರವಾಣಿ.
"ಇಲ್ಲ ತಾಯೆ, ನಾನು ನನ್ನ ಪ್ರತಿಜ್ಞೆಯನ್ನು
ಮರೆತಿಲ್ಲ. ಹಗಲು-ರಾತ್ರಿ ಎನ್ನದೆ, ನನ್ನ ಧರ್ಮಯುದ್ಧದ ಸಂಕಲ್ಪವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇನೆ.
ನಿನ್ನ ಆಶೀರ್ವಾದ ದೊರೆತರೆ, ನಾನು ಯಶಸ್ವಿಯಾಗುತ್ತೇನೆ. ತಾಯೆ, ನನ್ನನ್ನು ಆಶೀರ್ವದಿಸು!"
ಎಂದು ಹೇಳುತ್ತಾ ಮಯೂರಶರ್ಮನು ಕದಂಬವೃಕ್ಷಕ್ಕೆ
ಸಾಷ್ಟಾಂಗ ನಮಸ್ಕಾರ ಮಾಡಿದನು. ಆಗ, ಕದಂಬ ವನವಾಸಿಯಾದ ದೇವಿ ದುರ್ಗೆ ಪ್ರತ್ಯಕ್ಷಳಾಗಿ, "ವಿಜಯದ್ವಜ"
ಎಂಬ ಖಡ್ಗವನ್ನು ಮಯೂರನಿಗೆ ನೀಡುತ್ತಾ,
"ಜಯಶಾಲಿಯಾಗು ಮಗು. ಬಲಿಷ್ಠ ಕದಂಬ ಸಾಮ್ರಾಜ್ಯವನ್ನು
ಕಟ್ಟು, ಧರ್ಮವನ್ನು ಮರು ಸ್ಥಾಪಿಸು"
ಎಂದು ಆಶೀರ್ವದಿಸಿ ಅಂತರ್ದಾನಳಾದಳು.
ದೇವಿಯ ಆಶೀರ್ವಾದದಿಂದ ಉತ್ಸಾಹಿತನಾದ ಮಯೂರಶರ್ಮನು,
ಧರ್ಮನಿಷ್ಠ ಯೋಧರನ್ನು ಸೇರಿಸಿ, ತನ್ನ ಕನಸಿನ ರಾಜ್ಯ ಸ್ಥಾಪನೆಯ ದಿಕ್ಕಿನಲ್ಲಿ ಮುಂದಿನ ಹೆಜ್ಜೆ ಇಟ್ಟನು.
"ದರ್ಭೆ, ಇಂಧನ, ಹೋಮದ ಕಲ್ಲುಗಳು, ಹೋಮದ
ಸೌಟು, ತುಪ್ಪ ಮತ್ತು ಹೋಮಪಾತ್ರೆ ಹಿಡಿಯುವಲ್ಲಿ ನಿಪುಣವಾದ ಕೈ, ಇಂದು ಧರ್ಮ, ಶಿಷ್ಟರ ರಕ್ಷಣೆ, ಅಧರ್ಮಿ,
ಶತೃ ನಾಶ ಹಾಗೂ ಈ ಶಾಂತಿಯ ಭೂಮಿಯನ್ನು ಜಯಿಸಲು ದೈವದತ್ತವಾದ ಹೊಳೆಯುತ್ತಿರುವ ಖಡ್ಗವನ್ನು ಕೈಯಲ್ಲಿ ಹಿಡಿದನು."
ಪಲ್ಲವ ದೌರ್ಜನ್ಯದಿಂದ ಉಂಟಾದ ಆಕ್ರೋಶ, ಧರ್ಮದ ರಕ್ಷಣೆಯ ಸಂಕಲ್ಪ, ಮತ್ತು ತಾಳಗುಂದದ ಶಾಂತಿಗೆ ಮರಳಿ ಬೆಳಕು ತರುವ ಆಸೆ— ಮಯೂರ ಶರ್ಮನದು ಬರೀ ಆಸೆಯಲ್ಲ ಅದು ಮಹತ್ವಾಕಾಂಕ್ಷೆ ಮತ್ತು ದೈವ ಸಂಕಲ್ಪವೂ ಆಗಿತ್ತು. ಮಯೂರಶರ್ಮನು ತನ್ನ ಧರ್ಮನಿಷ್ಠ ಸಂಗಡಿಗರೊಂದಿಗೆ, ಕೋಲಾರದ
ಬಾಣರ ವಿರುದ್ಧ ಮೊದಲ ಯುದ್ಧಪ್ರಯೋಗಕ್ಕೆ ಮುಂದಾದನು.
ಅವನ ಕೈಯಲ್ಲಿದ್ದ ದೈವದತ್ತ ಖಡ್ಗ, ತಾಯಿಯ ಸಂಕಲ್ಪ, ಪ್ರಣವೇಶ್ವರ ಹಾಗೂ ದುರ್ಗೆಯ
ಆಶೀರ್ವಾದದಿಂದ ಹೊಳೆಯುತ್ತಿತ್ತು. ಯುದ್ಧದ ಮೈದಾನದಲ್ಲಿ, ಮೌನದಿಂದಲೇ ಧೈರ್ಯವನ್ನು ಹರಡುತ್ತಿದ್ದ ಮಯೂರಶರ್ಮ, ತನ್ನ ಸೈನ್ಯವನ್ನು ಚಾತುರ್ಯದಿಂದ ಮುನ್ನಡೆಸಿದನು. ಬಾಣರ ಸೈನ್ಯವು ಬಲಿಷ್ಠವಾಗಿದ್ದರೂ, ಮಯೂರಶರ್ಮನ ತಂತ್ರ, ಶಸ್ತ್ರಚಾತುರ್ಯ ಮತ್ತು ಧರ್ಮದ ಶಕ್ತಿಯಿಂದ ಯುದ್ಧದ ಮೊದಲ ಪ್ರಯತ್ನದಲ್ಲೇ ಜಯ ದೊರೆಯಿತು. ಈ ಜಯವು ಕೇವಲ ಯುದ್ಧದ ಗೆಲುವಲ್ಲ, ಅದು ಧರ್ಮದ ಪುನಸ್ಥಾಪನೆಯ ಮೊದಲ ಹೆಜ್ಜೆ. ಮಯೂರಶರ್ಮ ಮತ್ತು ಸಂಗಡಿಗರು ಉತ್ಸಾಹದಿಂದ ತುಂಬಿ, ಮುಂದಿನ ಹೋರಾಟಗಳಿಗೆ ಆತ್ಮವಿಶ್ವಾಸವನ್ನು ಗಳಿಸಿದರು. ಈ ಮೊದಲ ಗೆಲುವು, ಕದಂಬ ರಾಜ್ಯ ಸಂಸ್ಥಾಪನೆಯ ದಿಕ್ಕಿನಲ್ಲಿ ಅವರಿಗೆ ಪಲ್ಲವರೊಡನೆ ಸೆಣಸಲು ಮುನ್ನುಡಿಯಾಯಿತು.
ತಾಳಗುಂದದಲ್ಲಿ ಮಯೂರಶರ್ಮನ ಬೆಳವಣಿಗೆ ಹೆಚ್ಚುತ್ತಿರುವುದನ್ನು
ಪಲ್ಲವರ ಸಾಮಂತರು ಸಹಿಸಲಿಲ್ಲ. ಅವರು ಕಾಂಚಿಪುರಕ್ಕೆ ತೆರಳಿ ಪಲ್ಲವರ ಅರಸ ಮಹೇಂದ್ರವರ್ಮನಿಗೆ ದೂರಿತ್ತರು. ರಾಜಕುಮಾರ ವಿಷ್ಣುಗೋಪನು ಕೋಪಗೊಂಡು ಮಯೂರಶರ್ಮನ ಹುಟ್ಟಡಗಿಸುವೆನೆಂದು ಹೊರಟನು.
ಇತ್ತ ಮಯೂರಶರ್ಮನು ಶ್ರೀಪರ್ವತದ ಕಾಡುಗಳಲ್ಲಿ ತನ್ನ ನಂಬಿಕಸ್ಥ ಸೈನಿಕರೊಡನೆ ಹಾಗೂ ಸ್ಥಳೀಯ ಗಿರಿಜನರ ಯುವಕರನ್ನು ಸಂಘಟಿಸಿ ಸೈನ್ಯವನ್ನು ಸಿದ್ಧಪಡಿಸಿದನು. ಪಲ್ಲವರ ಅಂತರಪಾಲನನ್ನು ಪದಚ್ಯುತ ಗೊಳಿಸಿದನು . ಅದೇ ಸಮಯಕ್ಕೆ ಶ್ರೀಪರ್ವತಕ್ಕೆ ಆಗಮಿಸಿದ ಪಲ್ಲವರ ರಾಜಕುಮಾರ ವಿಷ್ಣುಗೋಪ ಹಾಗೂ ಮಯೂರಶರ್ಮ
ರಣರಂಗದ ಯುದ್ದೋನ್ಮಾದದಲ್ಲಿಎದುರುಗೊಂಡರು.
ಉತ್ಸಾಹಬರಿತನಾದ ಮಯೂರಶರ್ಮ, ವಿಷ್ಣುಗೋಪನನ್ನು ನೋಡುತ್ತಾ ಹೇಳಿದನು:
“ಎಲವೋ! ಕುನ್ನಿ ಪಲ್ಲವ ವಿಷ್ಣುಗೋಪ!
ನೆನಪಿದೆಯೇ ನಾನು ಮಯೂರಶರ್ಮ?
ಬಡ ಬ್ರಾಹ್ಮಣನೆಂದು ಕಾಂಚಿಪುರದಲ್ಲಿ ನನ್ನನ್ನು ಹಾಗೂ ಬ್ರಾಹ್ಮಣ ಕುಲವನ್ನು ಅವಮಾನಿಸಿದ್ದೆ.
ಅಲ್ಲಿ ನಾನು ನಿನ್ನ ಹಾಗೂ ನಿನ್ನ ಸೈನಿಕರ ಮುಂದೆ, ಗಾಯತ್ರಿದೇವಿಯ ಮೇಲಾಣೆ ಮಾಡಿ ಪ್ರತಿಜ್ಞೆ ಮಾಡಿದ್ದೆ.
ಪಲ್ಲವರ ಆಡಳಿತ ಕೊನೆಗೊಳಿಸಿ ರಾಜನಾಗುವೆನೆಂದು ಹೇಳಿದ್ದೆ.
ಇಂದು ನಿನ್ನನ್ನು ಸೋಲಿಸಿ ನನ್ನ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಸುಸಮಯ ಬಂದಿದೆ.
ಬಾ!, ನಿನ್ನ ಯುದ್ಧ ಚಮತ್ಕಾರವನ್ನು ನನ್ನ ಮುಂದೆ ತೋರಿಸು!”
ಎಂದು ಯುದ್ದಾಹ್ವಾನವನ್ನು ವಿಷ್ಣುಗೋಪನಿಗೆ ನೀಡಿದನು. ಮಯೂರಶರ್ಮನನ್ನು ನೋಡಿ ಆವೇಶದಿಂದ ಬುಸುಗುಡುತ್ತಿದ್ದ ವಿಷ್ಣುಗೋಪ ಕೋಪಾಗ್ನಿಯಲ್ಲಿ ಮರುಮಾತನಾಡದೆ ತನ್ನ ಖಡ್ಗವನ್ನು ಮಯೂರಶರ್ಮನ ಮೇಲೆ ಬೀಸಿದನು. ವಿಷ್ಣುಗೋಪನ ಖಡ್ಗವನ್ನು ಮೊದಲೇ ನಿರೀಕ್ಷಿಸಿದ್ದ ಮಯೂರಶರ್ಮ ಆಕ್ರಮಣವನ್ನು ಅರ್ಧದಲ್ಲಿಯೇ ತಡೆದನು. ಎದುರಾಳಿ ಬಳಲುವವರೆಗೂ ಯುದ್ಧ ತಂತ್ರಗಳನ್ನು ಬಳಸಿ ಯಾವುದೇ ಹಾನಿಯಾಗದಂತೆ ತಡೆಗಟ್ಟುವಲ್ಲಿ
ಯಶಸ್ವಿಯಾದನು. ವಿಷ್ಣುಗೋಪ ಖಡ್ಗವನ್ನು ಬೀಸಿ ಬೀಸಿ ಬೆವರುಹರಿಸಿದನಷ್ಟೇ!. ಸಮಯಕ್ಕಾಗಿಯೇ ಕಾಯುತ್ತಿದ್ದ ಮಯೂರಶರ್ಮ ತನ್ನ ಬಲವಾದ ಹಾಗೂ ದುರ್ಗೆಯು ದಯಪಾಲಿಸಿದ್ದ 'ವಿಜಯ ದ್ವಜ' ಖಡ್ಗವನ್ನು ಝಳಪಿಸಿದಾಗ ವಿಷ್ಣುಗೋಪನ ಖಡ್ಗವು ಮುರಿದುಬಿತ್ತು. ನಿಶಸ್ತ್ರನಾದ ವಿಷ್ಣುಗೋಪನನ್ನು ನೋಡಿ ಮಯೂರಶರ್ಮ ತನ್ನ ಖಡ್ಗವನ್ನು ವಿಷ್ಣುಗೋಪನ ಕೊರಳಿಗೆ ಹಿಡಿದನು. ಗಡ ಗಡ ನಡುಗುತ್ತಿದ್ದ ವಿಷ್ಣುಗೋಪನನ್ನು ನೋಡಿ ನಗುತ್ತಾ ಮಯೂರ ಶರ್ಮನು ಹೇಳಿದನು:
“ಓ ಪಲ್ಲವ ರಾಜಕುಮಾರ!,
ಕಂಡೆಯಾ ಈ ಬಡ ಬ್ರಾಹ್ಮಣನ ಪರಾಕ್ರಮವ?,
ಈ ಕ್ಷಣವೇ ನಿನ್ನ ರುಂಡವನ್ನು ನಿನ್ನ ದೇಹದಿಂದ ಬೇರ್ಪಡಿಸಬಲ್ಲೆ.
ಆದರೆ ಕನ್ನಡಿಗರು ನಿಶಸ್ತ್ರರ ಮೇಲೆ ತಮ್ಮ ಶೌರ್ಯವನ್ನು ತೋರಿಸುವುದಿಲ್ಲ.
ನಿನ್ನ ಸೈನಿಕರಿಗೆ ಹೇಳು—ಯುದ್ಧ ನಿಲ್ಲಿಸಲಿ.
ಬಾ! ನನ್ನೊಡನೆ ಮಲ್ಲಯುದ್ಧ ಮಾಡು. ಬಾ ಸೆಣಸು!”
ಎಂದು ಪಂಥಾಹ್ವಾನವನ್ನು ನೀಡಿದನು. ಕೂಡಲೇ ವಿಷ್ಣುಗೋಪನು ತನ್ನ ಸೈನಿಕರಿಗೆ ಯುದ್ಧ ನಿಲ್ಲಿಸಲು ಸೂಚಿಸಿದನು. ಇಬ್ಬರೂ ಮಲ್ಲ ಯುದ್ಧಕ್ಕೆ ಸಜ್ಜಾದರು.
ಮಲ್ಲಯುದ್ಧದ ಅಖಾಡದಲ್ಲಿ ಕೆಂಪು ಮಣ್ಣು ಯುದ್ದೋನ್ಮಾನಿತರಿಗೆ ಆಹ್ವಾನ ನೀಡುತ್ತಿತ್ತು. ವಿಷ್ಣುಗೋಪ ಹಾಗೂ ಮಯೂರಶರ್ಮ ಅಖಾಡದಲ್ಲಿ ಮದವೇರಿದ ಗಜಗಳಂತೆ ಸೆಣಸತೊಡಗಿದರು. ಮಯೂರಶರ್ಮ ದಣಿವರಿಯದೆ ವಿಷ್ಣುಗೋಪನಿಗೆ ಅಖಾಡದಲ್ಲಿ ಮಣ್ಣುಮುಕ್ಕಿಸಿದನು. ಕನ್ನಡಿಗರು ಸಾಹಸಿಗಳು, ಉದಾರ ಹೃದಯದವರು ಸಾಹಿತ್ಯಪ್ರಿಯರು, ಭಾಷಾ ನೈಪುಣ್ಯ ಹೊಂದಿದವರು,
ಮಯೂರಶರ್ಮನೂ ಅದಕ್ಕೆ ಹೊರತಾಗಿರಲಿಲ್ಲ. ಸೋತ ವಿಷ್ಣುಗೋಪನನ್ನು ಗೌರವಯುತವಾಗೇ ನಡೆಸಿಕೊಂಡ. ಸೋಲುಂಡ ವಿಷ್ಣುಗೋಪ "ಕ್ಷಾತ್ರತೇಜಸ್ಸಿನ ಮಯೂರಶರ್ಮ ನೀನು ಇಂದಿನಿಂದ ಮಯೂರವರ್ಮನೆಂದು, ಕನ್ನಡದ ಮೊದಲ ದೊರೆಯಾಗಿಯೂ, ಕದಂಬ ರಾಜ್ಯ ಸ್ಥಾಪಿಸಿ
ಪ್ರಖ್ಯಾತನಾಗೆಂದು ಹರಸಿ ಕಾಂಚಿಪುರಕ್ಕೆ ಹೊರಟನು. ವಿಷ್ಣುಗೋಪನ ಅಹಂಕಾರ ಶ್ರೀಪರ್ವತದ ಮಣ್ಣಲ್ಲಿ ಮಣ್ಣುಗೂಡಿತ್ತು. ಕನ್ನಡಿಗರ ಹೊಸ ಆಶಾಕಿರಣವೊಂದು ಚಿಗುರೊಡೆದು ನಭವ ನೋಡುತ್ತಿತ್ತು.
ಇತ್ತ ತಾಳಗುಂದದಲ್ಲಿ ಮಯೂರಶರ್ಮನ ವಿಜಯಯಾತ್ರೆಯ ಸುದ್ದಿ ಹಬ್ಬದ ವಾತಾವರಣವನ್ನು ಮೂಡಿಸಿತು.
ಪ್ರಣವೇಶ್ವರನ ಸನ್ನಿಧಿಯಲ್ಲಿ, ದುರ್ಗೆಯ ಅನುಗ್ರಹದೊಂದಿಗೆ
ಮಯೂರಶರ್ಮನ ರಾಜ್ಯಾಭಿಷೇಕದ ಸಡಗರಕ್ಕೆ ತಾಳಗುಂದ ಸಜ್ಜುಗೊಂಡಿತು.
ತಾಯಿ, ತಂದೆ, ತಾತನ ಕನಸುಗಳು ನನಸಾಯಿತು.
ಬಡ ಬ್ರಾಹ್ಮಣನಿಂದ ಕನ್ನಡದ ಮೊದಲ ರಾಜನಾಗುವವರೆಗೆ,
ಮಯೂರಶರ್ಮನು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಹೊರಹೊಮ್ಮಿದನು.
ಅವನ ಹೆಜ್ಜೆಗಳು ಕೇವಲ ವಿಜಯವಲ್ಲ, ಕನ್ನಡ ನಾಡಿನ ಹೊಸ ದಿಕ್ಕು.
ಕನ್ನಡಿಗರ ಹೃದಯ
ಸಿಂಹಾಸನದಲ್ಲಿ ಚಿರಸ್ಥಾಯಿಯಾಗಿ ಉಳಿದ ಹೆಮ್ಮೆಯ
ಸ್ವಾಭಿಮಾನದ ಉಸಿರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ