ಮಳೆಗಾಲದ
ಮಧ್ಯಾಹ್ನ. ಮೃಧುವಾದ ಸೂರ್ಯನ ಕಿರಣಗಳು, ಕಿಟಕಿಯ ಸಂಧಿಗಳಲ್ಲಿ
ನುಸುಳಿ ನೆಲೆಹಾಸಿನ ಗಾಜಿನಂತಹ ಟೈಲ್ ಮೇಲೆ ಬಿದ್ದು ಬೆಳಕಿನ ಹೊಸ ಪ್ರಪಂಚವನ್ನೇ ತೆರೆಯುತ್ತಿತ್ತು.
ಬೆಳಕು ಹಾಗೂ ಕತ್ತಲಿನ ಆಟ ಪ್ರಕೃತಿಯ ಮನೋಹರ ನೃತ್ಯದಂತೆ ತೋರುತ್ತಿತ್ತು. ನೋಡುತ್ತಾ ನಿಂತವರಿಗೆ
ಅದೊಂದು ಮೌನ ಗೀತ ನಾಟಕದಂತೆ ಭಾಸವಾಗುತ್ತಿದ್ದರಲ್ಲಿ ಆಶ್ಚರ್ಯವೇನಿಲ್ಲ.
‘ಆದಿ’ ಕಿಟಕಿಯ
ಪಕ್ಕದಲ್ಲೇ ಕಾಲುಮಡಚಿಕೊಂಡು ಸುಸ್ತಾಗಿ ಕುಳಿತಿದ್ದ. ಅವನ ದೃಷ್ಟಿ ಬೆಳಕಿನಲ್ಲಿ
ತೇಲಿದ ಧೂಳಿನ ಕಣಗಳತ್ತ ಸೆಳೆದಿತ್ತು. ಮನಸ್ಸಿನ ಆಲೋಚನೆಗಳು
ಆವೇಗ ಪಡೆದುಕೊಳ್ಳುತ್ತಿದ್ದವು. ಅಂತರ್ಜ್ಞಾನದ ಆ
ಕ್ಷಣದಲ್ಲಿ, ಆತನ ಮುಖದ ಮೇಲೆ
ಕಾಲವೇ ತಂಗಿದಂತಾಗಿತ್ತು. ಎಲ್ಲವೂ ಮೃದುವಾಗಿ ಸಾಗುತ್ತಿತ್ತು, ಆದರೆ ಆ ಮೌನದಲ್ಲೊಂದು
ಅರ್ಥ ತುಂಬಿಕೊಂಡಿತ್ತು—ಒಂದು ಅನಾಮಿಕ ನಿರೀಕ್ಷೆಯ
ಭಾರ.
ಅವನಲ್ಲಿ
ದುಃಖದ ಛಾಯೆ ಇರಲಿಲ್ಲ. ಎದೆಯೊಳಗಿನ
ನಿಶ್ಚಲತೆ ಮಾತ್ರ ಮುಖದ ಭಾವದಲ್ಲಿ ಎದ್ದು
ಕಾಣುತ್ತಿತ್ತು. ಯಾವ ಗುರಿಯು ತೃಪ್ತಿ
ನೀಡದ ಹೊತ್ತಿನಲ್ಲಿನ ದಿಕ್ಕುತಪ್ಪಿದ ಮೌನ ಕೋಣೆಯಲ್ಲಿ ಮಿಡುಕಾಡುತ್ತಿತ್ತು. ಕಲ್ಪನೆಗಳು ಸಮುದ್ರದ ಅಲೆಗಳಂತಿರುತ್ತಿದ್ದವು—ನಿರಂತರ
ಮುನ್ನಡೆಯುತ್ತಿದ್ದರೂ, ಯಾವುದು ತೀರದ ನೆಲವನ್ನೂ ಮುಟ್ಟಿರಲಿಲ್ಲ.
"ಇದೇ ಮೊದಲಲ್ಲ"
ಅಂದನು ನಿಧಾನವಾಗಿ. ಇಂತಹ ಶೂನ್ಯ ಸಮಯ
ಹಿಂದೆಯೂ ಅನೇಕ ಬಾರಿ ಬಂದು
ಹೋಗಿವೆ. ಪ್ರತಿ ಸಲವೂ ಯಾವುದೋ ಒಂದು
ಬಗೆಯ ಸಂಚಲನ ಮನದಲ್ಲಿ ಮೂಡಿ ಮಿಂಚಿನಂತೆ ಮರೆಯಾಗುತ್ತಿತ್ತು.
ಕಿಟಕಿಗೆ ಹಾಕಿದ್ದ ಅಂಕ ತಣ್ಣನೆಯ ಗಾಳಿಯಿಂದ
ಲಯಬದ್ಧವಾಗಿ ಕಂಪಿಸುತ್ತ, ಗಾಳಿಪಟದಂತೆ ಹಾರಲು ಪ್ರಯತ್ನಿಸುತ್ತಿತ್ತು. ರಸ್ತೆಯ ಮೇಲೆ, ಮಕ್ಕಳ ಗುಂಪೊಂದು ಕಾಗದದ ವಿಮಾನಗಳನ್ನು ತಯಾರಿಸಿ ಹಾರಿಸುವಲ್ಲಿ ತಲ್ಲೀನವಾಗಿದ್ದರು. ಅವರ ನಗೆಯ ಶಬ್ದ
ಸುತ್ತಲೂ ಹರಡಿ, ಒಂದು ಅಪ್ಯಾಯಮಾನ ತೇಜಸ್ಸನ್ನು
ತರಲಾರಂಭಿಸಿತು. ‘ಆದಿ’ಗೆ, ಅವರ ಆಟವನು
ನೋಡಿ, ಮನದ ನಸುನಗೆ ತುಟಿಯಂಚಿನಲ್ಲಿ
ಮೌನವಾಗಿ ಮೂಡುತ್ತಿತ್ತು.
ನಾಳೆಗಳ
ಭರವಸೆ ಅವನ ಕಣ್ಣುಗಳಲ್ಲಿ ಹೊಳೆಯುತ್ತಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ